Saturday, 1 March 2014

ನಿಲ್ಲದಿರು......

ಎಲ್ಲೋ ದಿಕ್ಕುದೆಸೆಗಳಿಲ್ಲದ ಕಾಣದ ಕತ್ತಲೆಯ
ಹಾದಿಬೀದಿಯ ತುಂಬಾ ಕತ್ತಲು
ಕಾಡು ಮರಗಳು ಬೆಳೆದು ನಿಂತಿರುವ ಸೂಚನೆಗಳಿಲ್ಲದೆ
ಫಲಕಗಳು ಕಾಣದ ದಾರಿಯಾದರೂ ನಿಲ್ಲದಿರು

ನಿಲ್ಲದ ಹರಕೆಗೆ ಇರದಿರಲಿ ಸೋರಿಕೆ
ಓಡು ಹರಿಸಿ ಒರೆಸಲಾಗದ ಬೆವರು
ಹಾದಿಗಡ್ಡ ನಿಂತರೂ ಸರಿಯೇ ಕಲ್ಪನಾ ಚಿತ್ರಿಕೆ
ಹಿಂದಿರುಗಿ ನೋಡದೆ ಸಾಗುತಿರು ನಿಲ್ಲದಿರು

ಯಾರಿಗೋ ಅಂಜುವ ಬಾಳುವೆ ಇದ್ದರೂ
ಬಿಡದೆ ನಿನ್ನ ಛಲದ ಉಸಿರು
ಕಾಲಚಕ್ರ ಎಡದಿ ತಡವಿ ಬಿದ್ದರೂ
ಸಾಧನೆಗೆ ಕೊನೆಯಿಲ್ಲ ಎಂದು ನಿಲ್ಲದಿರು

ಸರ್ವಮತದ ಊರುಕೇರಿ ಜಾತಿಭೇದವೆಲ್ಲ ಮರೆತು
ಬೆಳಕಿನಾಟ ನೋಡಲು ಸಾಗುತಿರು
ಕಪ್ಪುಬಿಳುಪು ಜೀವನಕ್ಕೆ ಬಣ್ಣಬಣ್ಣ ಜಾತ್ರೆ ಬೆರೆತು
ಬಾಳಿನರ್ಥ ಉದ್ಭವಿಸುವವರೆಗೂ ನೀ ನಿಲ್ಲದಿರು

ಪಯಣ ಬೆಳೆಯಲಿ ಬಾಳ ಕೊನೆಗೆ ಸೊಪ್ಪು ಯಾಕೆ ಸ್ವಾರ್ಥಕೆ?
ಎಂಬ ಮಾತು ನೆನಪಲಿಟ್ಟು ಮನನ ದಿನವೂ ಮಾಡಿರು
ಸುಸ್ತು ಕಾಲ ಎಳೆದು ಬಿಸಾಡು ತಂಪು ಇರಲಿ ಜೀವಕೆ
ಸತ್ಯ ಕಾಲ ಇದುವೇ ಎಂದು ಓಡುತೋಡುತ ನಿಲ್ಲದಿರು

ಶ್ರೀನಿವಾಸ ಶ್ರೀಚಂದ್ರ

ಗುರುಗೀತೆ


ಓಂ ಗುರುಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರಃ
ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ

ತಾಯಿಯೇ ಮೊದಲಾ ಗುರುವಾದರೇ
ನಮ್ಮ ಬಾಳಿನ ಜ್ಯೋತಿ ನೀವಾದಿರೀ
ಗುರುವೇ
ಹೂವನ್ನು ಪೋಣಿಸಲು ಬೇಕು ದಾರ
ನಮ್ಮ ಬಾಳಿಗೆ ನೀವೇ ಆಧಾರ
ಗುರುವೇ

ಪ್ರಕೃತಿಗೇ ಹಸಿರು ನೀವೆ ನಮಗೆ ಉಸಿರು
ಮಗುವಿಗೆ ತಾಯಿಯಂತೆ
ಹಾಲಿಗೆ ಸಕ್ಕರೆ ನೀವು ನೀಡಿದ ಅಕ್ಕರೆ
ಕೊಂಡೊಯ್ದಿದೆ ನಮ್ಮೆಲ್ಲರ ಆ ಶಿಖರಕೆ
ಗುರುವೇ

ತಂದೆತಾಯೇ ದೈವ ಸ್ನೇಹವೆಂಬ ಜೀವ
ನಮಗೆಲ್ಲಾ ನೀವಾಗಲೂ
ಬಾಳಲಿ ಭಯವಿಲ್ಲ ಎಂದೆಂದೂ ಜಯವೇ ಎಲ್ಲಾ
ಗೆಲುವಾಯಿತು ನಮ್ಮೆಲ್ಲರ ಈ ಜೀವನ
ಗುರುವೇ

ಕಣ್ಣಿಗೆ ಜ್ಯೋತಿ ನೀವಾಗಲೂ
ನಮ್ಮ ಕತ್ತಲೆಯ ದಾರಿಗೆ ಬೆಳಕಾದಿರಿ
ಗುರುವೇ

ಶ್ರೀನಿವಾಸ ಶ್ರೀಚಂದ್ರ